ಕಂಪಾಸಿಟಿ : ಹೂ ಬಿಡುವ ಸಸ್ಯಕುಟುಂಬಗಳಲ್ಲೆಲ್ಲ ಅತ್ಯಂತ ದೊಡ್ಡದು. ದ್ವಿದಳ ಸಸ್ಯವರ್ಗ, ಸಂಯುಕ್ತ ದಳಗಳುಳ್ಳ ಸಸ್ಯ ವಿಭಾಗ, ಕಂಪ್ಯಾನುಲೇಟಿ ಅಥವಾ ಆಸ್ಟರೇಲಿಸ್ ಗಣಕ್ಕೆ ಸೇರಿದೆ. ಆಸ್ಟರೇಸೀ ಪರ್ಯಾಯನಾಮ. ಇದರಲ್ಲಿ ಒಂಬೈನೂರು ಜಾತಿಗಳು, ಸು. ಹದಿಮೂರು ಸಾವಿರ ಪ್ರಭೇದಗಳು ಇವೆ. ಜಗತ್ತಿನಾದ್ಯಂತ ಪಸರಿಸಿರುವ ಈ ಕುಟುಂಬದ ಸಸ್ಯಗಳನ್ನು ಅವುಗಳ ವಿಶಿಷ್ಟವಾದ ಚಂಡುಮಂಜರಿ ಹೂಗೊಂಚಲಿನಿಂದ ಗುರುತಿಸಬಹುದು. ಕಂಪಾಸಿóಟಿ ಕುಟುಂಬದ ಸಸ್ಯಗಳು ತಮ್ಮ ಬೆಳೆವಣಿಗೆಯ ರೀತಿಯ ವೈವಿಧ್ಯಕ್ಕೆ ಹೆಸರಾಗಿವೆ. ಹೆಚ್ಚಿನವು ಮೂಲಿಕೆಗಳು. ಪೊದೆಗಳೂ ಸಾಮಾನ್ಯ. ಆದರೆ ಮರ, ಬಳ್ಳಿ, ಅಪ್ಪು ಗಿಡ ಮುಂತಾದುವು ಬಹು ವಿರಳ. ಅಲ್ಲದೆ ಇವು ಬೆಳೆಯುವ ಸ್ಥಳಗಳಲ್ಲೂ ವೈವಿಧ್ಯ ಇದೆ. ಬಹುಪಾಲು ಪ್ರಭೇದಗಳು ಸಾಧಾರಣ ನೆಲದಲ್ಲಿ ಬೆಳೆದರೂ ಕೆಲವು ಕೆಸರು ಭೂಮಿಯಲ್ಲಿರುವುದೂ ಉಂಟು. ಆದರೆ ನಿಜವಾದ ಜಲಸಸ್ಯಗಳಿಲ್ಲ. ಒಂದೇ ಜಾತಿಯ ವಿವಿಧ ಪ್ರಭೇದಗಳು ಬೇರೆ ಬೇರೆ ಆಕಾರ, ರಚನೆ, ಬೆಳೆವಣಿಗೆಯ ರೀತಿಯನ್ನು ಪ್ರದರ್ಶಿಸಬಹುದು. ಉದಾಹರಣೆಗೆ ಸಿನೀಶಿಯೋ. ಇದರ ಬೇರು ಸಮೂಹ ತಾಯಿಬೇರು ಪ್ರಕಾರಕ್ಕೆ ಸೇರಿದ್ದು. ಕೆಲವು ಜಾತಿಗಳಲ್ಲಿ ಬೇರುಗಳು ಆಹಾರ ಸಂಗ್ರಹಿಸುವುದರಿಂದ ಗೆಡ್ಡೆಯಂತಿವೆ. ಉದಾಹರಣೆಗೆ ಡೇಲಿಯ, ಟರ್ಯಾಕ್ಸಕಮ್ ಮತ್ತು ಸಿಕೋರಿಯಮ್. ಕಾಂಡದ ರಚನೆಯಲ್ಲೂ ವೈವಿಧ್ಯವಿದೆ. ಕಾಂಡ ಕೆಲವು ಜಾತಿಗಳಲ್ಲಿ ಮೃದುವಾಗಿದ್ದರೆ, ಇನ್ನು ಕೆಲವು ಬಗೆಗಳಲ್ಲಿ ಒರಟಾಗಿರುವುದು. ಸಾಮಾನ್ಯವಾಗಿ ಮೇಲಕ್ಕೆ ನೇರವಾಗಿ ಬೆಳೆಯುತ್ತದೆ. ಹಲವು ಪ್ರಭೇದಗಳಲ್ಲಿ ನೆಲದ ಮೇಲೆಯೂ ನೆಲದ ಒಳಗೂ ಭೂಮಿಗೆ ಸಮಾನಾಂತರವಾಗಿ ಬೆಳೆಯುವುದು ಉಂಟು. ಬೆಲ್ಲಿಸ್, ಅಕಿಲೀಯ, ಸೇವಂತಿಗೆ ಮುಂತಾದುವುಗಳಲ್ಲಿ ಕಾಂಡದ ಕವಲುಗಳು ನಿರ್ಲಿಂಗರೀತಿ ವಂಶಾಭಿವೃದ್ದಿಯಲ್ಲಿ ಸಹಾಯಕವಾಗಿವೆ. ಕಾಂಡದ ಮೇಲೆಲ್ಲ ನಯವಾದ ತುಪ್ಪುಳವಿದೆ. ಸಿನರಿಯಿ ಗುಂಪಿನ ಪ್ರಭೇದಗಳ ಕಾಂಡದಲ್ಲಿ ಮುಳ್ಳುಗಳಿರುವುದುಂಟು. ಲೆಟಿಸ್, ಡ್ಯಾಂಡಿಲೈಯನ್ ಮುಂತಾದ ಜಾತಿಗಳಲ್ಲಿ ಕಾಂಡಗಳಲ್ಲಿ ಬಿಳಿಯ ಬಣ್ಣದ ಹಾಲ್ನೊರೆಯಿದೆ. ಈ ಕುಟುಂಬದಲ್ಲಿ ಸಾಧಾರಣವಾಗಿ ಎಲ್ಲ ರೀತಿಯ ಎಲೆಗಳೂ ಇವೆ. ಕಾಂಡದ ಮೇಲೆ ಎಲೆಗಳಿರುವುದು ಸಾಮಾನ್ಯವಾದರೂ ಕೆಲವು ಪ್ರಭೇದಗಳಲ್ಲಿ ಕಾಂಡ ಬಹುಚಿಕ್ಕದಾಗಿದ್ದು, ಎಲೆಗಳು ಬೇರಿನಿಂದಲೇ ಹೊರಟಂತೆ (ರ್ಯಾಡಿಕಲ್ ಎಲೆಗಳು) ಕಾಣುತ್ತವೆ. ಉದಾಹರಣೆಗೆ ಟರ್ಯಾಕ್ಸಕಮ್. ಕಾಂಡದ ಮೇಲಿನ ಎಲೆಗಳ ಜೋಡಣೆ ವಿವಿಧ ಬಗೆಯದು-ಪರ್ಯಾಯ, ಅಭಿಮುಖ, ಸುತ್ತುಜೋಡಣೆ-ಹೀಗೆ. ಕೆಲವು ಬಗೆಗಳಲ್ಲಿ ಎಲೆಗಳು ಸರಳ, ಇನ್ನು ಕೆಲವುಗಳಲ್ಲಿ ಸಂಯುಕ್ತ. ಎಲೆಯ ಅಲಗು ಗರಿಯ ರೂಪದಲ್ಲೊ ಹಸ್ತಾಕಾರದಲ್ಲೊ ವಿಭಾಗವಾಗಿರುವುದೂ ಉಂಟು. ಸಾಮಾನ್ಯವಾಗಿ ವೃಂತಪರ್ಣಗಳಿಲ್ಲ.
ಪುಷ್ಪಮಂಜರಿ ಮೂಲತಃ ರೇಸಿಮೊಸ್ ತರದ್ದು. ಸಾಮಾನ್ಯವಾಗಿ ಹೂಗಳೆಲ್ಲ ಚಿಕ್ಕವಾಗಿದ್ದು ಗುಂಪಾಗಿ ಕೂಡಿ ಚಂಡುಮಂಜರಿಯಾಗಿದೆ. ಚಿಕ್ಕದಾದ ಈ ಹೂಗಳನ್ನು ಫ್ಲೊರೆಟುಗಳೆನ್ನುತ್ತಾರೆ. ಕೆಲವು ಚಂಡುಮಂಜರಿಗಳಲ್ಲಿ ಒಂದೇ ಒಂದು ಪುಷ್ಪವಿರುವುದನ್ನು ಕಾಣಬಹುದು. 

ಇನ್ನು ಕೆಲವು ಸಸ್ಯಗಳಲ್ಲಿ ಕೋರಿಂಬ್, ಮಧ್ಯಾರಂಭಿಮಂಜರಿ ಅಥವಾ ಸಂಯುಕ್ತ ಚಂಡುಮಂಜರಿಗಳು ಕೂಡ ಇವೆ. ಚಂಡುಮಂಜರಿಯನ್ನು ಆವರಿಸಿಕೊಂಡು ಹಸಿರಾದ ಉಪಪತ್ರಗಳಿವೆ (ಬ್ರಾಕ್ಟ್‌್ಸ). ಇವು ಪುಷ್ಪಪಾತ್ರೆಯಂತೆ ಕಾರ್ಯ ನಿರ್ವಹಿಸುತ್ತವೆ. ಹೂಗಳೆಲ್ಲ ಚಿಕ್ಕವಾಗಿದ್ದು ಒಂದೇ ಹೂಗೊಂಚಲಿನ ಅಕ್ಷಾಕಾಂಡದ ಮೇಲೆ ತಳವೂರಿವೆ. ಅಕ್ಷಕಾಂಡದ ತುದಿಭಾಗ ವಿಶಾಲವಾಗಿ, ಚಪ್ಪಟೆಯಾಗಿ ಹೊರಮೈ ಉಬ್ಬಿರುತ್ತದೆ ಅಥವಾ ಕದಿರಾಕಾರವಾಗಿದೆ. ಅಕ್ಷಕಾಂಡದ ಆಕಾರ, ಹೊರಮೈ ಪದರಗಳು ಕುಟುಂಬದ ಸಸ್ಯಗಳ ವರ್ಗೀಕರಣದಲ್ಲಿ ಸಹಾಯಕವಾಗಿವೆ. ನಯವಾದ ಅಥವಾ ರೋಮಯುಕ್ತವಾದ ಪೊರೆಗಳು ಪ್ರತಿಯೊಂದು ಹೂವಿನ ಬುಡದಲ್ಲೂ ಕಾಣಿಸಿಕೊಳ್ಳುತ್ತವೆ. ಸಿನರಿಯಿಗಳಲ್ಲಿ ಬ್ರಾಕ್ಟ್‌ಗಳು ಬಿರುಗೂದಲಿನಂತಿವೆ.

ಹೂಗೊಂಚಲಿನ ಎಲ್ಲ ಹೂಗಳು ಒಂದೇ ತೆರನಾಗಿದ್ದು ದ್ವಿಲಿಂಗಿಗಳಾಗಿರಬಹುದು. ಆದರೆ ಕೆಲವು ಜಾತಿಗಳಲ್ಲಿ ಎರಡು ಬಗೆಯ ಹೂಗಳಿವೆ. ಕೆಲವು ಹೂಗಳು ಹೂಗೊಂಚಲಿನ ಮಧ್ಯಭಾಗದಲ್ಲಿ ಜೋಡಣೆಯಾಗಿ ಅರೀಯ ಸಮಾಂಗತೆಯನ್ನು ಪ್ರದರ್ಶಿಸುತ್ತವೆ. ಅವನ್ನು ಡಿಸ್ಕ್‌ ಹೂಗಳೆನ್ನುತ್ತಾರೆ. ಇನ್ನು ಕೆಲವು ಹೂಗಳು ಹೂಗೊಂಚಲಿನ ಅಂಚಿನಲ್ಲಿ ಜೋಡಣೆಯಾಗಿ ಉಭಯಪಾಶರ್ವ್‌ಸಮಾಂಗತೆಯನ್ನು ಹೊಂದಿವೆ. ಇವಕ್ಕೆ ರೇ ಹೂಗಳೆಂದು ಹೆಸರು. ಉದಾಹರಣೆಗೆ ಸೂರ್ಯಕಾಂತಿ. ಸಾಮಾನ್ಯವಾಗಿ ಡಿಸ್ಕ್‌ ಹೂಗಳು ದ್ವಿಲಿಂಗಿಗಳಾಗಿಯೂ ರೇ ಹೂಗಳು ಏಕಲಿಂಗಿಗಳಾಗಿಯೂ ಇರುತ್ತವೆ. ರೇ ಹೂಗಳ ಸಂಖ್ಯೆ ಜಾತಿಯಿಂದ ಜಾತಿಗೆ ವ್ಯತ್ಯಾಸಗೊಳ್ಳಬಹುದು. ಹೂಗಳಲ್ಲೆಲ್ಲ ನೀಚಸ್ಥಾನದ ಅಂಡಾಶಯವಿದೆ. ಆಂಬ್ರೊಸಿಯಾದಲ್ಲಿ ಪುಷ್ಪಪಾತ್ರೆಯಿಲ್ಲ. ಇನ್ನು ಕೆಲವು ಹೂಗಳಲ್ಲಿ ಪುಷ್ಪಪಾತ್ರೆ ಅನೇಕ ಕೂದಲುಗಳಾಗಿ ಮಾರ್ಪಟ್ಟಿದೆ. ಅವನ್ನು ಪ್ಯಾಪಸ್ಗಳೆಂದು ಕರೆಯುತ್ತಾರೆ. ಹಣ್ಣುಗಳಲ್ಲಿ ಸ್ಪಷ್ಟವಾಗಿ ಎದ್ದುತೋರುವ ಪ್ಯಾಪಸ್ಗಳು ಫಲಪ್ರಸಾರಕ್ರಿಯೆಯಲ್ಲಿ ಉಪಯುಕ್ತವಾಗಿವೆ. ದಳಗಳು ಐದು; ಸಂಯುಕ್ತವಾಗಿವೆ. ಅವು ಡಿಸ್ಕ್‌ ಹೂಗಳಲ್ಲಿ ಸಮನಾಗಿವೆ. ಆದರೆ ರೇ ಹೂಗಳಲ್ಲಿ ಅಸಮ. 

ಕೇಸರಗಳು ಐದು. ಕೇಸರ ದಂಡಗಳು ಸ್ವತಂತ್ರವಾಗಿದ್ದು, ಪರಾಗಕೋಶಗಳು ಮಾತ್ರ ಕೂಡಿವೆ. ಈ ರೀತಿಯ ಕೂಡುವಿಕೆಯನ್ನು ಸಿಂಜಿನಿಶಿಯಸ್ ಸ್ಥಿತಿ ಎನ್ನುತ್ತಾರೆ. ಅಂಡಾಶಯದಲ್ಲಿ ಕೂಡಿರುವ ಎರಡು ಕಾರ್ಪೆಲುಗಳಿವೆ. ಶಲಾಕೆ ಸರಳವಾಗಿದ್ದು ಪರಾಗಕೋಶವಲಯದಿಂದ ಆವೃತವಾಗದೆ. ಶಲಾಕಾಗ್ರ ವಿಭಾಗವಾಗಿದೆ. ಅಂಡಾಶಯದಲ್ಲಿ ಒಂದೇ ಕೋಣೆ ಹಾಗೂ ಒಂದೇ ಅಂಡಕ ಇವೆ. ಇವು ಉತ್ಪಾದಿಸುವ ಒಡೆಯದ ಒಣಫಲಗಳಿಗೆ ಎಕೀನುಗಳೆನ್ನುತ್ತಾರೆ. ಹೂಗಳೆಲ್ಲ ಚಂಡಮಂಜರಿಯಲ್ಲಿ ಕೂಡಿರುವುದರಿಂದ ಪರಾಗ ಪ್ರಸಾರ ಬಹಳ ಸುಲಭ. ಒಂದು ಕೀಟದ ಒಂದೇ ಸಂದರ್ಶನ ಬಹುಪಾಲು ಹೂಗಳಿಗೆ ಪರಾಗವನ್ನು ಒದಗಿಸುತ್ತದೆ.

ಕಂಪಾಸಿóಟಿ ಕುಟುಂಬದ ಕೆಲವು ಪ್ರಭೇದಗಳು ಆಹಾರಸಸ್ಯಗಳಾಗಿ ಪ್ರಖ್ಯಾತವಾಗಿವೆ. ಉದಾಹರಣೆಗೆ ಲ್ಯಾಕ್ಟುಕ (ಲೆಟಿಸ್), ಸಿನರ (ಆರ್ಟಿಚೋಕ್), ಟ್ರಾಗೋಪೋಗಾನ್ (ಸಾಲ್ಸಿಫೈ) ಇತ್ಯಾದಿ. ಕಾರ್ಥಮಸ್ ಟಿಂಕ್ಟೋರಿಯಸ್ (ಕುಸುಬೆ) ಗಿಡದಿಂದ ಸ್ಯಾಫ್ಲವರ್ ಎಂಬ ಕೆಂಪು ಬಣ್ಣವನ್ನು ತಯಾರಿಸುತ್ತಾರೆ. ಅಲ್ಲದೆ ಇದರಿಂದ ಖಾದ್ಯ ಎಣ್ಣೆಯನ್ನೂ ತೆಗೆಯಬಹುದು. ಪ್ರಮುಖ ಕೀಟನಾಶಕವಾದ ಪೈರಿತ್ರಮ್ ಎಂಬುದು ಸೇವಂತಿಗೆಯಿಂದ (ಕ್ರೈಸಾಂತಿಮಮ್ ಕಾಕ್ಸಿನಿಯಮ್) ಬರುತ್ತದೆ. ಕಾಫಿಪುಡಿಯೊಂದಿಗೆ ಬೆರೆಸಲಾಗುವ ಚಿಕೊರಿಯನ್ನು ಈ ಕುಟುಂಬದ ಸಿಕೊರಿಯಮ್ ಪ್ರಭೇದದಿಂದ ಪಡೆಯಲಾಗುತ್ತದೆ. ಆರ್ಟಿಮಿಸಿಯ ಜಾತಿಯ ಪ್ರಭೇದಗಳಿಂದ ಸ್ಯಾಂಟೋನಿನ್ ಎಂಬ ಜಂತುನಾಶಕ ಔಷಧಿಯನ್ನು ತಯಾರಿಸುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಕುಟುಂಬದ ಸು. 215 ಜಾತಿಯ ಗಿಡಗಳನ್ನು ಅಲಂಕಾರ ಸಸ್ಯಗಳಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ. ಇವುಗಳಲ್ಲಿ ಡೇಲಿಯ, ಸೂರ್ಯಕಾಂತಿ, ಸೇವಂತಿಗೆ, ಆಸ್ಟರ್, ಡೇಸಿó, ಜಿûನಿಯ; ಕ್ಯಾಲೆಂಡುಲ, ಕಾಸ್ಮಾಸ್, ಗೇಲಾರ್ಡಿಯ-ಮುಂತಾದುವು ಬಹುಮುಖ್ಯವಾದುವು.           (ಎ.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ